ಪುಸ್ತಕ ವಿಮರ್ಶೆ : ವಿಷಮ ಭಿನ್ನರಾಶಿ

ವಸುಧೇಂದ್ರರ ವಿಷಮ ಭಿನ್ನರಾಶಿ ಎಂಬ ಕತಾಸಂಕಲನವನ್ನು ಓದಿದೆ‌. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಭಿನ್ನರಾಶಿಗಳನ್ನು ಸೂಚಿಸುವಂತೆಯೇ ಮೊದಲನೆಯೇ ಭಾಗ ಅಂಶ. ಎರಡನೇಯದ್ದು ಛೇದ. 


ಈ ಕೃತಿಯಲ್ಲಿನ ಹೊಸತನದ ಬಗ್ಗೆ ಹೇಳಬೇಕು. ಸಾಹಿತ್ಯವೆಂದರೆ ಅದು ಬರೀಯ ಹಳ್ಳಿ ಕಥೆಯಿರಬೇಕು, ಸೊಗಡೆಂಬುದು ಹಳ್ಳಿಗೆ ಮಾತ್ರವೇ ಇರುವಂತದ್ದು, ನಿಜವಾದ ಮನುಷ್ಯ ಸಹಜ ಗುಣಗಳು ಹಳ್ಳಿಯ ಪಾತ್ರಗಳಲ್ಲಿ ಮಾತ್ರ ವ್ಯಕ್ತವಾಗುತ್ತದೆ ಎಂಬ, ಸತ್ಯಕ್ಕೆ ಬೆಳಕಿನ ವರ್ಷಗಳಷ್ಟು ದೂರದ ಮಾತನ್ನೇ ನಂಬಿಕೊಂಡು ಬರೆಯುವವರ ಓದುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅನುದಿನವೂ ತಿಂದರೆ ವಿಧ್ಯಾರ್ಥಿ ಭವನದ ದೋಸೆಯೂ ಬೋರಾಗುತ್ತದೆ ಎಂಬಂತೆ ಬರೀ ಅದದೇ ಹಳ್ಳಿಯ ಕತೆಗಳು, ಸಮಾನತೆ, ನೆಲ ಮೂಲದ ಸಂಸ್ಕೃತಿ, ಇಡೀ ಪ್ರಪಂಚದಲ್ಲೇ ದಿ ಬೆಸ್ಟ್ ಸಂಸ್ಕಾರ ಇರುವವರು ನಾವು ಎಂಬ ಭಾವ, ಸಿರಿವಂತರ ದ್ವೇಷ ಇತ್ಯಾದಿ ಇತ್ಯಾದಿ ಚರ್ವಿತಚರ್ವಣಗಳನ್ನು ಓದಿ ಓದಿ ಬೋರಾಗಿತ್ತು. ಈ ಬೇಸರಕ್ಕೆ ವಸುಧೇಂದ್ರ ಮದ್ದು ಅರೆದಿದ್ದಾರೆ.


ವಸುಧೇಂದ್ರ ಅವರ ಈ ಅರ್ಬನ್ ಕತೆಗಳು ನನ್ನ ಮಟ್ಟಿಗಂತೂ ನೂತನವಾದವು. ಪ್ರಾಯಶಃ ಕನ್ನಡದ ಮಟ್ಟಿಗೂ ನೂತನವಾದಂತವೇ ಆಗಿದೆ. ಸೊಗಡೆಂಬುದು ಪ್ರಾಂತ್ಯಾತೀತ ಎಂಬುದು ನನ್ನ ಭಾವನೆ. ಬಸವನಗುಡಿಯೆಂಬ ಸಾಂಸ್ಕೃತಿಕ ಪ್ರದೇಶಕ್ಕೊಂದು ಸೊಗಡಿದೆ. ಬೆಳ್ಳಂದೂರೆಂಬ ಹೈಟೆಕ್‌ ಸ್ಲಮ್ಮಿಗೂ ಒಂದು ಸೊಗಡಿದೆ. ಹೊನ್ನಾವರ ಕುಮಟೆ ಶಿರಸಿಗೆ ಇರುವಂತೆಯೇ. ಆದರೆ ಹಳ್ಳಿ ಕತೆಗಳು ಮಾತ್ರವೇ ಸಾಹಿತ್ಯ ಎಂಬ ನಿಯಮವು ಕನ್ನಡ ಸಾಹಿತ್ಯಕ್ಕೆ ಹೊಸನೀರು ಬರದಂತೆ ಕಟ್ಟಿದೆ. ಹಳ್ಳಿಯ ಪರಿಸರವೇ ಶ್ರೇಷ್ಠ, ಅಲ್ಲಿರುವ ವೈವಿಧ್ಯತೆ ಸಿಟಿಯಲ್ಲಿಲ್ಲ ಎನ್ನುವ ಧೋರಣೆಯು ಸಾರಸ್ವತ ಲೋಕದಲ್ಲಿ ಢಾಳಾಗಿದೆ ಎಂಬುದು ನನ್ನ ಅಭಿಪ್ರಾಯ.


ಈ ಪುಸ್ತಕದಲ್ಲಿ ನನಗೆ ಹೆಚ್ಚು ಇಷ್ಟವಾದುದು ಸಾಫ್ಟ್ವೇರ್ ಇಂಜಿನಿಯರ್ ಒಬ್ಬನ ಕತೆ. ತೆಲುಗು ನಾಡಿನಲ್ಲಿ ಅಮೇರಿಕೆಗೆ ಹಾರುವ ಸೆಳೆತವು ಅಪವಾದವೆನ್ನುವಂತೆ ಜಾಸ್ತಿ ಎಂಬುದನ್ನು ಕೇಳಿದ್ದೆ. ಅದೇ ವಿಷಯವನ್ನು ಇಟ್ಟುಕೊಂಡು ವಸುಧೇಂದ್ರ ಅವರು ಬಹಳ ಚೆನ್ನಾಗಿ ಕಥೆ ಹೆಣೆದಿದ್ದಾರೆ. ನನಗೆ ಸಾಫ್ಟವೇರ್ ಜಗತ್ತಿನ ಕತೆಯನ್ನು ಕನ್ನಡದಲ್ಲಿ ಓದಿ ಸಂತಸವಾಯಿತು. ವಸುಧೇಂದ್ರರ ಅರ್ಬನ್ ಕತೆಗಳು ಅದರಲ್ಲೂ ವಿಶೇಷವಾಗಿ ಸಾಫ್ಟ್ ವೇರ್ ಜಗತ್ತಿನ ಕತೆಗಳು ಸಾಕಷ್ಟು ಕುತೂಹಲದಿಂದ ಓದಿಸಿಕೊಂಡವು. ಈ ಸಾಫ್ಟ್ ವೇರ್ ಕತೆಗಳಲ್ಲಿ ಬೆಂಗಳೂರಿನ ನಿಖರವಾದ ಸ್ಥಳಗಳ ಬಗ್ಗೆ ಉಲ್ಲೇಖವಿಲ್ಲವಾದರೂ, ಅವು ಕೆಆರ್ ಪುರವೋ, ಬೆಳ್ಳಂದೂರೋ ಅಥವಾ ಹೆಎಸ್ಆರ್ ಬಡಾವಣೆಗಳಲ್ಲಿ ನಡೆದಿರಬಹುದಾದ ಕತೆಗಳು ಎಂಬುದನ್ನು ಸುಲಭವಾಗಿ ಊಹಿಸಬಹುದು.



ವಸುಧೇಂದ್ರರ ಕತೆಗಳಲ್ಲಿ ಸದಾ ಕಾಣಸಿಗುವ ಹೈದರಾಬಾದ್ ಕರ್ನಾಟಕ ಪ್ರದೇಶದ ಮಾಧ್ವ ಬ್ರಾಹ್ಮಣ ಕುಟುಂಬದ ಕತೆಗಳು ಇಲ್ಲಿಯೂ ಇವೆ. ನಿದ್ರಾಹೀನತೆಯ ಬಗ್ಗೆ ಇರುವ ಕತೆ, ಗತದ ನೋವು ಭವಿತವನ್ನು ಪ್ರಭಾವಿಸುವ ಸೂಕ್ಷ್ಮ ವಿಷಯದ ಕತೆ ಇವೆಲ್ಲವೂ ಇಷ್ಟವಾದವು. 



ವಸುಧೇಂದ್ರರ ಬಹುತೇಕ ಪುಸ್ತಕಗಳಂತೆಯೇ ಈ ಪುಸ್ತಕವನ್ನೂ ಖುಷಿ ಪಟ್ಟು ಓದಿದೆ. ಭೂಮಿಯಿಂದ ಜಾಗ ಖಾಲಿ ಮಾಡಿದವರಿಗೆ ಸಿಗದ, ಆದರೆ ಇನ್ನೂ ಬದುಕಿರುವ ನನಗೆ ಸಿಕ್ಕ ಈ ಓದುವ ಭಾಗ್ಯವ ನೆನೆದು ಹರುಷಕಿದೇ ದಾರಿಯೆಂಬುದ ಮನಗಂಡೆ.





Popular posts from this blog

ಚಿತ್ತಾಲರ ಆಬೋಲಿನ ಕಥೆ

ಚಲನಚಿತ್ರ ವಿಮರ್ಶೆ : ಶಾಖಾಹಾರಿ