ಚಿತ್ತಾಲರ ಆಬೋಲಿನ ಕಥೆ

ಈಗ ತಾನೆ ಯಶವಂತ ಚಿತ್ತಾಲರ ಆಬೋಲೀನ ಎಂಬ ಕಥೆಯನ್ನು ಓದಿದೆ. ಮನಸ್ಸು ಖಿನ್ನವಾಗಿದೆ. ಖಾಲಿಯೂ ಆಗಿದೆ. ಚಿತ್ತಾಲರ ಅನೇಕ ಕಥೆಗಳಲ್ಲಿರುವಂತಹ ಖಾಲಿತನ ಇಲ್ಲಿಯೂ ಇದೆ. ಇಂತಹ ಕಥೆ ಬರೆದ ಚಿತ್ತಾಲರ ಮನಸ್ಸು ಅದೆಷ್ಟು ನಲುಗಿತ್ತೋ? ಅದೆಷ್ಟು ನಡುಗಿತ್ತೋ? ಒಂದೇ ಸಮನೆ ಜಡ್ಜಮೆಂಟಲ್ ಆಗಿ ಮನಸ್ಸು ಯೋಚಿಸುತ್ತದೆ.. ಚಿತ್ತಾಲರು ಚಿತ್ತಾಲರಾಗಲು ಕಾರಣವೇನು? ನಮ್ಮ ಅಸ್ತಿತ್ವದ ಬಗ್ಗೆ ಬದುಕಿಗಿರುವ ದಿವ್ಯ ನಿರ್ಲಕ್ಷ್ಯದ ಕುರಿತಾದ ಸ್ಪಷ್ಟವಾದ ಅರಿವು ಅವರಿಗೆ ಬರಲು ಕಾರಣವೇನು? ಬಾಲ್ಯವೋ? ವಾತಾವರಣವೋ? ಅನುಭವವೋ? ಸಕ್ಕರೆ ಕಾಹಿಲೆಯಂತೆಯೇ self-awareness ಎನ್ನುವುದೂ ಆನುವಂಶಿಕವೋ?



ನೀವು ಆಬೋಲಿನ‌ ಕಥೆಯನ್ನು ಓದದವರಾಗಿದ್ದು ಓದುವ ಮನಸ್ಸಿದ್ದವರಾದರೆ ಈ ಕೆಳಗಿನ ಒಂದು ಪ್ಯಾರಾವನ್ನು ಓದಬೇಡಿ. ಆಬೋಲಿನದ ಸಾರಾಂಶ ಕೊಡಲೇಬೇಕಾದ್ದರಿಂದ ನಿಮಗದು ಕಥೆಯ ತಿರುಳು ಬಿಟ್ಟುಕೊಟ್ಟಂತಾಗುತ್ತದೆ.


################

ಆಬೋಲಿನಳೆಂಬ ಹರೆಯದ ಮುಗ್ಧ ಹುಡುಗಿಗೆ ಮನವೇಲನೆಂಬ ದುಷ್ಟ ಮಧ್ಯವಯಸ್ಕ, ಚುಂಬನದಿಂದಲೇ ಸಂತಾನ ಸಾಧ್ಯವೆಂದು ನಂಬಿಸಿ, “ನಿನಗೆ ನಾನು ಎರಡು ತಿಂಗಳ ಹಿಂದೆ‌ ಚುಂಬಿಸಿದ್ದೆನಲ್ಲ, ಹಾಗಾಗಿ ನೀನು ಎರಡು ತಿಂಗಳ ಬಸುರಿ” ಎಂದು ತಲೆ ತಿರುಗಿಸುತ್ತಾನೆ. ಇದನ್ನೇ ನಂಬುವ ಆಬೋಲಿನಳು ಊರಿನ ಮುಂದೆ ತಾನು ಬಸುರಿಯೆಂಬುದನ್ನು ಒಪ್ಪಿ ತನ್ನನ್ನು ಅತ್ಯಾಚಾರ ಮಾಡಿದವನನ್ನೇ ವರಿಸುತ್ತಾಳೆ [ಅವಳಿಗೆಲ್ಲಿ ಗೊತ್ತಿದೆ, ಚುಂಬನದಿಂದ ಸಂತಾನೋತ್ಪತ್ತಿ ಆಗದೆಂದು?]. ಮದುವೆಯಾಗಿ ಕೆಲಮಾಸಗಳು ಸರಿದ ಮೇಲೆ ಆಂಬೋಲಿನಳಿಗೆ ತಾನು ಮೋಸ ಹೋಗಿದ್ದೇನೆಂದು ತಿಳಿಯುತ್ತದೆ. ಊರಿನ ಮುಂದೆ ಹೋಗಿ ಹೇಗೆ ತಾನು ನಿಜವಾಗಿಯೂ ಮುಗ್ಧೆ ಎಂದು ಹೇಳಿಕೊಂಡಾಗ, ಕುತಂತ್ರಿ ಮನವೇಲ "ಈಕೆ ನನ್ನನ್ನು ಮದುವೆಯಾಗಲೆಂದೇ ಬಸುರಿಯೆಂದು ಸುಳ್ಳುಸುಳ್ಳೇ ಸುದ್ದಿ ಹಬ್ಬಿಸಿದ್ದಾಳೆ" ಎಂದು ಊರಿನ ಮುಂದೆ ಮಾನಭಂಗ ಮಾಡುತ್ತಾನೆ. ಹೇಗೆ ತಾನು ಮನವೇಲ ಹೆಣೆದ ಬಲೆಗೆ ಬಿದ್ದೆ, ನನ್ನನ್ನು ಬೀಳಿಸಲೆಂದೇ ತೋಡಿದ ಗುಂಡಿಗೆ, ಆತನೇ ಹಾಕಿದ್ದ ದಾರಿಯಲ್ಲಿ ನಡೆದು ಬಿದ್ದು ಹೋದೆ ಎನ್ನುವ ವಾಸ್ತವವನ್ನು ಅರಗಿಸಿಕೊಳ್ಳಲಾಗದೇ ಆಂಬೋಲಿನ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

############



ನಿನ್ನಯ ಒಳ್ಳೆಯತನದ ಬಗ್ಗೆ ಕಿಂಚಿತ್ತೂ ಕ್ಯಾರೇ ಮಾಡದ ಜಗತ್ತಿನ ಕುರಿತಾದ[ಅಷ್ಟೇ ಪ್ರಮಾಣದ ನಿರ್ಲಕ್ಷ್ಯ ಜಗತ್ತಿಗೆ ಮನವೇಲನ ದುಷ್ಟತನದ ಬಗ್ಗೆಯೂ ಇದೆ] ಕಥೆಯಂತೆಯೂ ತೋರುತ್ತದೆ. ಆಂಬೋಲಿನಳಂತಹ ಮುಗ್ಧಳಿಗೆ ಹೀಗಾಯಿತಲ್ಲ, ಮನವೇಲನಂತಹ ದುರುಳನಿಗೆ ಒಳ್ಳೆಯದಾಗುವುದಿಲ್ಲ ಎಂದು ಅಪೇಕ್ಷೆ ಪಡುವ ಮನಸ್ಸುಗಳನ್ನು ಚಿವುಟಿ ಚಿತ್ತಾಲರು ಕೇಕೆ ಹಾಕಿದಂತೆ ಕೆಲವು ಸಲ ಅನಿಸುತ್ತದೆ. ಆಬೋಲಿನಳಂತಹ ಎಳೆಯ ಚರ್ಮದ ಪರಮ ಸುಂದರಿಯನ್ನು ಐದಾರು ಮಾಸ ಅನುಭವಿಸಿದ ಸುಖ ಮನವೇಲನಿಗೆ. ಇಂತಹ ಕೀಚಕನ ತಾಳಕ್ಕೆ ನಾನು ಕುಣಿದು ಬರ್ಬಾದಾದೆನಲ್ಲ ಎಂಬ ಖಿನ್ನ ಭಾವ ಆಬೋಲಿನಳಿಗೆ. ಚಿತ್ತಾಲರ ಕಥೆಗಳಲ್ಲಿ‌ ಕಾಣಸಿಗುವ ಜಗತ್ತು ಅದೆಷ್ಟು ಘೋರ!



ನಮ್ಮ ಸಂಸ್ಕೃತಿಯಲ್ಲಿ ಅತ್ಯಾಚಾರ ಮಾಡಿದವನಿಗೇ, ಅತ್ಯಾಚಾರ ಮಾಡಿಸಿಕೊಂಡವಳನ್ನು ಮದುವೆ ಮಾಡಿಸಿಬಿಡುವ ವಿಚಿತ್ರವಾದ ರಿವಾಜು‌ ಮಿಳಿತಾಗಿರುವುದನ್ನೂ ಗಮನಿಸಬೇಕು. [ಮದುವೆಯಾಗುವ ಇಚ್ಛೆಯಿದ್ದೂ ಹುಡುಗಿ ಸಿಗದೇ ಹೋದರೆ ಆಕೆಯನ್ನು ಅತ್ಯಾಚಾರ ಮಾಡಿಬಿಡಬೇಕು ಎನ್ನುವ ವಿಕೃತ ಅರ್ಥವನ್ನು ಇದು ಕಲ್ಪಿಸುವುದಿಲ್ಲವೇ? ಇದಾವ ಕ್ರೂರವಾದ ನ್ಯಾಯಶಾಸ್ತ್ರ?]. ನಮ್ಮ ಧೀಮಂತ ಸಿನಿಮಾರಂಗದಲ್ಲಿ ಬಂದ ಕೆಲವು ಸಿನೆಮಾಗಳು ಇಂತಹುದ್ದನ್ನೆಲ್ಲಾ ಭಯಂಕರ ಸರಿಯೆಂಬಂತೆ ಬಿಂಬಿಸುತ್ತಿದ್ದವು. ಓಬೀರಾಯನ‌ ಕಾಲದ್ದಲ್ಲ, ತೀರ ೨೦೦೦ದ ಇಸವಿಯಲ್ಲಿ ಬಂದ ಸಿನೆಮಾವೊಂದರಲ್ಲಿ, ಸಿನೆಮಾದ ನಾಯಕನಟ ಊರಿನ ಪಟೇಲ, ಒಂದು ಹುಡುಗಿಗೆ ಅತ್ಯಾಚಾರವಾದಗ ಆಕೆಯನ್ನು ಕೋರ್ಟಿಗೆ ಕಳಿಸಿ ಕೇಸು ಹಾಕಿಸುವುದು ಬಿಟ್ಟು ಆಕೆಯನ್ನು ಅತ್ಯಾಚಾರ ಮಾಡಿದವನಿಗೇ ಕೊಟ್ಟು ಮದುವೆ ಮಾಡಿಸಿ, ದೇಶಕ್ಕೆಲ್ಲಾ ಕಾನೂನಿನ ನ್ಯಾಯ, ಈ ಊರಲ್ಲಿ ನಂದೇ ನ್ಯಾಯ ಅಂದುಬಿಡುತ್ತಾನೆ. ಈ ಸನ್ನಿವೇಶ ತೆರೆಯ ಮೇಲೆ‌ ಬಂದಾಗ ಶಿಳ್ಳೆ ಹೊಡೆದ ಬಾಯಿಗಳೆಷ್ಟೋ, ಚಪ್ಪಾಳೆ ತಟ್ಟಿದ ಕೈಗಳೆಷ್ಟೋ. ಚಿತ್ತಾಲರ ಕಥೆಯಲ್ಲಿ ಈ ಅನಾಗರಿಕ ರಿವಾಜಿನ ಮೇಲಿರುವ ಟೀಕೆಯೂ ಪರೋಕ್ಷವಾಗಿ ಕಾಣುತ್ತದೆ.



ಚಿತ್ತಾಲರ ಕಥೆಗಳು ಜಗತ್ತಿನ ನಿರರ್ಥಕತೆಯ ಅರ್ಥ ಮಾಡಿಸುತ್ತವೆ. ಬಿರುಕುಗಳಿಲ್ಲದೆ ಬೆಳಕು ಬರಲು ಸಾಧ್ಯವಿಲ್ಲವಲ್ಲ!? ಬಿರುಕುಗಳ ಮೂಲಕ ದಾಟಿ ಬಂದ ಬೆಳಕು ಚಿತ್ತಾಲರಿಂದ ಕಥೆ, ಕಾದಂಬರಿಗಳನ್ನು ಬರೆಸಿದೆ. 




Popular posts from this blog

ಪುಸ್ತಕ ವಿಮರ್ಶೆ : ವಿಷಮ ಭಿನ್ನರಾಶಿ

ಚಲನಚಿತ್ರ ವಿಮರ್ಶೆ : ಶಾಖಾಹಾರಿ