ಚಲನಚಿತ್ರ ವಿಮರ್ಶೆ : ಶಾಖಾಹಾರಿ
ಪುಸ್ತಕ ಓದಿ ಮಡುಚಿಟ್ಟ ಮೇಲೂ ಕಾಡುವುದು ಒಳ್ಳೆಯ ಕಾದಂಬರಿಗಳ ಲಕ್ಷಣ. ಸಿನಿಮಾ ನೋಡಿಕೊಂಡು ಸಿನಿಮಂದಿರದಿಂದ ಆಚೆಬಂದಮೇಲೂ ಕಾಡುವುದು ಒಳ್ಳೆಯ ಸಿನಿಮಾಗಳ ಲಕ್ಷಣ. ಎರಡೂವರೆ ತಾಸುಗಳ ಕಾಲ ನಮ್ಮೆದುರು ಪ್ರದರ್ಶನಗೊಳ್ಳುವ ಸಿನಿಮಾಗಳು ಕೊನೆಗೆ ನಮಗೇನೋ ಕೊಡಬೇಕು. ಅದನ್ನು ನಾವು ಆಗಾಗ್ಗೆ ಮೆಲುಕು ಹಾಕಬೇಕು. ಸಿನಿಮಾ ನಮ್ಮೊಳಗೆ, ನಮ್ಮೊಂದಿಗೆ ಜೀವಂತವಾಗಿರಬೇಕು.
"ಶಾಖಾಹಾರಿ" ಸಿನಿಮಾ ಬಹಳ ಚೆನ್ನಾಗಿದೆ. ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆಯವರ ನಟನೆ ಇನ್ನೂ ಕಾಡುತ್ತಿದೆ. ಚಿತ್ತಚಂಚಲತೆಗೆ ಅವಕಾಶವೇ ಕೊಡದಂತೆ ಕತೆ ಹೇಳುವುದು ಸುಲಭದ ಮಾತಲ್ಲ. ಇಷ್ಟು ಚೆನ್ನಾಗಿ ಕತೆಹೇಳುವ ಕಲೆ ಸಿದ್ಧಿಸಿಕೊಂಡಿರುವ ನಿರ್ದೇಶಕರು[ಸಂದೀಪ ಸುಂಕದ] ಖಂಡಿತ ಅಭಿನಂದನಾರ್ಹರು. ಹಾಡುಗಳು, ಹಿನ್ನಲೆ ಸಂಗೀತ ಎಲ್ಲವೂ ಸೂಪರ್. ಸಂಭಾಷಣೆಗಳೂ ಸೂಪರ್. "ಕಲ್ಲು ಪುಡಿಯಾದರೆ ಮಣ್ಣಾಗುತ್ತೆ, ಮನಸ್ಸು ಪುಡಿಯಾದರೆ ಕಲ್ಲಾಗುತ್ತೆ" ಎಂಬ ಸಂಭಾಷಣೆಯನ್ನು ನಾನು ಮರೆಯಲಾರೆ.
ಸಿನಿರಸಿಕರುಗಳಿಂದ ನೋಡಿಸಿಕೊಳ್ಳುವುದೇ ಸಿನಿಮಾಗಳ ಉದ್ದೇಶವಂತೆ. ಈ ಸಿನಿಮಾವು ಖಂಡಿತ ಅದಕ್ಕೆ ಅರ್ಹವಾಗಿದೆ.
ಸಂದೀಪ ಸುಂಕದ ಅವರ ಮುಂದಿನ ಸಿನಿಮಾದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದರೆ, ನನ್ನ ಮನಸ್ಸು ಬೇರೆಲ್ಲಾ ಸುದ್ದಿಗಳನ್ನೂ ಬದಿಗೊತ್ತಿ ಈ ಸಿನಿವರದಿಯನ್ನೇ ಓದಬೇಕೆಂದು ತಾಕೀತು ಮಾಡುತ್ತದೆ ಎನ್ನುವುದು ನೂರಕ್ಕೆ ನೂರರಷ್ಟು ಖಾತ್ರಿ.