Posts

ಚಿತ್ತಾಲರ ಆಬೋಲಿನ ಕಥೆ

ಈಗ ತಾನೆ ಯಶವಂತ ಚಿತ್ತಾಲರ ಆಬೋಲೀನ ಎಂಬ ಕಥೆಯನ್ನು ಓದಿದೆ. ಮನಸ್ಸು ಖಿನ್ನವಾಗಿದೆ. ಖಾಲಿಯೂ ಆಗಿದೆ. ಚಿತ್ತಾಲರ ಅನೇಕ ಕಥೆಗಳಲ್ಲಿರುವಂತಹ ಖಾಲಿತನ ಇಲ್ಲಿಯೂ ಇದೆ. ಇಂತಹ ಕಥೆ ಬರೆದ ಚಿತ್ತಾಲರ ಮನಸ್ಸು ಅದೆಷ್ಟು ನಲುಗಿತ್ತೋ? ಅದೆಷ್ಟು ನಡುಗಿತ್ತೋ? ಒಂದೇ ಸಮನೆ ಜಡ್ಜಮೆಂಟಲ್ ಆಗಿ ಮನಸ್ಸು ಯೋಚಿಸುತ್ತದೆ.. ಚಿತ್ತಾಲರು ಚಿತ್ತಾಲರಾಗಲು ಕಾರಣವೇನು? ನಮ್ಮ ಅಸ್ತಿತ್ವದ ಬಗ್ಗೆ ಬದುಕಿಗಿರುವ ದಿವ್ಯ ನಿರ್ಲಕ್ಷ್ಯದ ಕುರಿತಾದ ಸ್ಪಷ್ಟವಾದ ಅರಿವು ಅವರಿಗೆ ಬರಲು ಕಾರಣವೇನು? ಬಾಲ್ಯವೋ? ವಾತಾವರಣವೋ? ಅನುಭವವೋ? ಸಕ್ಕರೆ ಕಾಹಿಲೆಯಂತೆಯೇ self-awareness ಎನ್ನುವುದೂ ಆನುವಂಶಿಕವೋ? ನೀವು ಆಬೋಲಿನ‌ ಕಥೆಯನ್ನು ಓದದವರಾಗಿದ್ದು ಓದುವ ಮನಸ್ಸಿದ್ದವರಾದರೆ ಈ ಕೆಳಗಿನ ಒಂದು ಪ್ಯಾರಾವನ್ನು ಓದಬೇಡಿ. ಆಬೋಲಿನದ ಸಾರಾಂಶ ಕೊಡಲೇಬೇಕಾದ್ದರಿಂದ ನಿಮಗದು ಕಥೆಯ ತಿರುಳು ಬಿಟ್ಟುಕೊಟ್ಟಂತಾಗುತ್ತದೆ. ################ ಆಬೋಲಿನಳೆಂಬ ಹರೆಯದ ಮುಗ್ಧ ಹುಡುಗಿಗೆ ಮನವೇಲನೆಂಬ ದುಷ್ಟ ಮಧ್ಯವಯಸ್ಕ, ಚುಂಬನದಿಂದಲೇ ಸಂತಾನ ಸಾಧ್ಯವೆಂದು ನಂಬಿಸಿ, “ನಿನಗೆ ನಾನು ಎರಡು ತಿಂಗಳ ಹಿಂದೆ‌ ಚುಂಬಿಸಿದ್ದೆನಲ್ಲ, ಹಾಗಾಗಿ ನೀನು ಎರಡು ತಿಂಗಳ ಬಸುರಿ” ಎಂದು ತಲೆ ತಿರುಗಿಸುತ್ತಾನೆ. ಇದನ್ನೇ ನಂಬುವ ಆಬೋಲಿನಳು ಊರಿನ ಮುಂದೆ ತಾನು ಬಸುರಿಯೆಂಬುದನ್ನು ಒಪ್ಪಿ ತನ್ನನ್ನು ಅತ್ಯಾಚಾರ ಮಾಡಿದವನನ್ನೇ ವರಿಸುತ್ತಾಳೆ [ಅವಳಿಗೆಲ್ಲಿ ಗೊತ್ತಿದೆ, ಚುಂಬನದಿಂದ ಸಂತಾನೋತ್ಪತ್ತಿ ಆಗದೆಂದು?]....

ಪುಸ್ತಕ ವಿಮರ್ಶೆ : ವಿಷಮ ಭಿನ್ನರಾಶಿ

ವಸುಧೇಂದ್ರರ ವಿಷಮ ಭಿನ್ನರಾಶಿ ಎಂಬ ಕತಾಸಂಕಲನವನ್ನು ಓದಿದೆ‌. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಭಿನ್ನರಾಶಿಗಳನ್ನು ಸೂಚಿಸುವಂತೆಯೇ ಮೊದಲನೆಯೇ ಭಾಗ ಅಂಶ. ಎರಡನೇಯದ್ದು ಛೇದ.  ಈ ಕೃತಿಯಲ್ಲಿನ ಹೊಸತನದ ಬಗ್ಗೆ ಹೇಳಬೇಕು. ಸಾಹಿತ್ಯವೆಂದರೆ ಅದು ಬರೀಯ ಹಳ್ಳಿ ಕಥೆಯಿರಬೇಕು, ಸೊಗಡೆಂಬುದು ಹಳ್ಳಿಗೆ ಮಾತ್ರವೇ ಇರುವಂತದ್ದು, ನಿಜವಾದ ಮನುಷ್ಯ ಸಹಜ ಗುಣಗಳು ಹಳ್ಳಿಯ ಪಾತ್ರಗಳಲ್ಲಿ ಮಾತ್ರ ವ್ಯಕ್ತವಾಗುತ್ತದೆ ಎಂಬ, ಸತ್ಯಕ್ಕೆ ಬೆಳಕಿನ ವರ್ಷಗಳಷ್ಟು ದೂರದ ಮಾತನ್ನೇ ನಂಬಿಕೊಂಡು ಬರೆಯುವವರ ಓದುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅನುದಿನವೂ ತಿಂದರೆ ವಿಧ್ಯಾರ್ಥಿ ಭವನದ ದೋಸೆಯೂ ಬೋರಾಗುತ್ತದೆ ಎಂಬಂತೆ ಬರೀ ಅದದೇ ಹಳ್ಳಿಯ ಕತೆಗಳು, ಸಮಾನತೆ, ನೆಲ ಮೂಲದ ಸಂಸ್ಕೃತಿ, ಇಡೀ ಪ್ರಪಂಚದಲ್ಲೇ ದಿ ಬೆಸ್ಟ್ ಸಂಸ್ಕಾರ ಇರುವವರು ನಾವು ಎಂಬ ಭಾವ, ಸಿರಿವಂತರ ದ್ವೇಷ ಇತ್ಯಾದಿ ಇತ್ಯಾದಿ ಚರ್ವಿತಚರ್ವಣಗಳನ್ನು ಓದಿ ಓದಿ ಬೋರಾಗಿತ್ತು. ಈ ಬೇಸರಕ್ಕೆ ವಸುಧೇಂದ್ರ ಮದ್ದು ಅರೆದಿದ್ದಾರೆ. ವಸುಧೇಂದ್ರ ಅವರ ಈ ಅರ್ಬನ್ ಕತೆಗಳು ನನ್ನ ಮಟ್ಟಿಗಂತೂ ನೂತನವಾದವು. ಪ್ರಾಯಶಃ ಕನ್ನಡದ ಮಟ್ಟಿಗೂ ನೂತನವಾದಂತವೇ ಆಗಿದೆ. ಸೊಗಡೆಂಬುದು ಪ್ರಾಂತ್ಯಾತೀತ ಎಂಬುದು ನನ್ನ ಭಾವನೆ. ಬಸವನಗುಡಿಯೆಂಬ ಸಾಂಸ್ಕೃತಿಕ ಪ್ರದೇಶಕ್ಕೊಂದು ಸೊಗಡಿದೆ. ಬೆಳ್ಳಂದೂರೆಂಬ ಹೈಟೆಕ್‌ ಸ್ಲಮ್ಮಿಗೂ ಒಂದು ಸೊಗಡಿದೆ. ಹೊನ್ನಾವರ ಕುಮಟೆ ಶಿರಸಿಗೆ ಇರುವಂತೆಯೇ. ಆದರೆ ಹಳ್ಳಿ ಕತೆಗಳು ಮಾತ್ರವೇ...

ಚಲನಚಿತ್ರ ವಿಮರ್ಶೆ : ಶಾಖಾಹಾರಿ

ಪುಸ್ತಕ ಓದಿ ಮಡುಚಿಟ್ಟ ಮೇಲೂ ಕಾಡುವುದು ಒಳ್ಳೆಯ ಕಾದಂಬರಿಗಳ ಲಕ್ಷಣ. ಸಿನಿಮಾ ನೋಡಿಕೊಂಡು ಸಿನಿಮಂದಿರದಿಂದ ಆಚೆಬಂದಮೇಲೂ ಕಾಡುವುದು ಒಳ್ಳೆಯ ಸಿನಿಮಾಗಳ ಲಕ್ಷಣ. ಎರಡೂವರೆ ತಾಸುಗಳ ಕಾಲ ನಮ್ಮೆದುರು ಪ್ರದರ್ಶನಗೊಳ್ಳುವ ಸಿನಿಮಾಗಳು ಕೊನೆಗೆ ನಮಗೇನೋ ಕೊಡಬೇಕು. ಅದನ್ನು ನಾವು ಆಗಾಗ್ಗೆ ಮೆಲುಕು ಹಾಕಬೇಕು. ಸಿನಿಮಾ ನಮ್ಮೊಳಗೆ, ನಮ್ಮೊಂದಿಗೆ ಜೀವಂತವಾಗಿರಬೇಕು.  "ಶಾಖಾಹಾರಿ" ಸಿನಿಮಾ ಬಹಳ ಚೆನ್ನಾಗಿದೆ. ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆಯವರ ನಟನೆ ಇನ್ನೂ ಕಾಡುತ್ತಿದೆ. ಚಿತ್ತಚಂಚಲತೆಗೆ ಅವಕಾಶವೇ ಕೊಡದಂತೆ ಕತೆ ಹೇಳುವುದು ಸುಲಭದ ಮಾತಲ್ಲ. ಇಷ್ಟು ಚೆನ್ನಾಗಿ ಕತೆಹೇಳುವ ಕಲೆ‌ ಸಿದ್ಧಿಸಿಕೊಂಡಿರುವ ನಿರ್ದೇಶಕರು[ಸಂದೀಪ ಸುಂಕದ] ಖಂಡಿತ ಅಭಿನಂದನಾರ್ಹರು. ಹಾಡುಗಳು, ಹಿನ್ನಲೆ ಸಂಗೀತ ಎಲ್ಲವೂ  ಸೂಪರ್. ಸಂಭಾಷಣೆಗಳೂ ಸೂಪರ್. "ಕಲ್ಲು ಪುಡಿಯಾದರೆ ಮಣ್ಣಾಗುತ್ತೆ, ಮನಸ್ಸು ಪುಡಿಯಾದರೆ ಕಲ್ಲಾಗುತ್ತೆ" ಎಂಬ ಸಂಭಾಷಣೆಯನ್ನು ನಾನು‌ ಮರೆಯಲಾರೆ.  ಸಿನಿರಸಿಕರುಗಳಿಂದ ನೋಡಿ‌ಸಿಕೊಳ್ಳುವುದೇ ಸಿನಿಮಾಗಳ ಉದ್ದೇಶವಂತೆ. ಈ ಸಿನಿಮಾವು ಖಂಡಿತ ಅದಕ್ಕೆ‌ ಅರ್ಹವಾಗಿದೆ. ಸಂದೀಪ‌ ಸುಂಕದ ಅವರ ಮುಂದಿನ ಸಿನಿಮಾದ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದರೆ, ನನ್ನ ಮನಸ್ಸು ಬೇರೆಲ್ಲಾ ಸುದ್ದಿಗಳನ್ನೂ ಬದಿಗೊತ್ತಿ ಈ ಸಿನಿವರದಿಯನ್ನೇ ಓದಬೇಕೆಂದು ತಾಕೀತು ಮಾಡುತ್ತದೆ ಎನ್ನುವುದು ನೂರಕ್ಕೆ ನೂರರಷ್ಟು ಖಾತ್ರಿ.